ಜಯಚಂದ್ರ 1

ಕ್ರಿ.ಶ. 9ನೆಯ ಶತಮಾನದಲ್ಲಿ ತ್ರಿಗರ್ತವನ್ನು (ಇಂದಿನ ಕಾಂಗ್ರಾ ಕಣಿವೆಯ ಪ್ರದೇಶ) ಆಳುತ್ತಿದ್ದ ಅರಸುಮನೆತನವೊಂದರ ಒಬ್ಬ ಅರಸ. ಜಯಚಂದ್ರ ಎಂದೂ ಇವನು ಸಂಬೋಧಿತನಾಗಿದ್ದಾನೆ. ಈತನ ವಿಷಯವಾಗಿ ಹೆಚ್ಚಿನ ಐತಿಹಾಸಿಕ ವಿಷಯಗಳು ದೊರೆಯುವುದಿಲ್ಲ. ಕಾಂಗ್ರಾ ಜಿಲ್ಲೆಯ ಸಾಜನಾಥ ಎಂಬಲ್ಲಿ ದೊರೆತ ಎರಡು ಶಾನಸಗಳಲ್ಲಿ ಇವನ ಹೆಸರು ಉಕ್ತವಾಗಿದೆ. ಇವುಗಳ ಪ್ರಶಸ್ತಿಗಳನ್ನು ಬರೆದವನು ರಾಮ ಎಂಬ ಕವಿ-804ರಲ್ಲಿ. ಜಯಚಂದ್ರನ ಸಾಮಂತನೂ ಕೀರಗ್ರಾಮದ (ಅ ಜಿಲ್ಲೆಯ ಇಂದಿನ ಕೀರಗಾಂವ್) ರಾಜನಕನೂ ಆದ ಲಕ್ಷ್ಮಣಚಂದ್ರನೆಂಬವನ ಮತ್ತು ಅವನ ವಂಶದ ವರ್ಣನೆ ಇವುಗಳಲ್ಲಿದೆ. ತ್ರಿಗರ್ತದ ಅರಸನಾದ ಹೃದಯಚಂದ್ರನ ಮಗಳಾದ ಲಕ್ಷಣಿಕಾ ಎಂಬವಳನ್ನು ಲಕ್ಷ್ಮಣಚಂದ್ರನ ತಂದೆಯಾದ ಬಿಲ್ಹಣ ಮದುವೆಯಾದನೆಂದು ಇವುಗಳಲ್ಲಿ ಹೇಳಿದೆ. ಜಯಚಂದ್ರ ಹೃದಯಚಂದ್ರನ ಮಗನೂ ಲಕ್ಷ್ಮಣಿಕೆಯ ಸೋದರನೂ ಆಗಿದ್ದಿರಬಹುದೆಂಬುದು ಈ ಪ್ರಶಸ್ತಿಗಳನ್ನು ಸಂಪಾದಿಸಿದ ಬ್ಯೂಲರರ ಅಭಿಪ್ರಾಯ.

ಇದೇ ಮನೆತನದ ಪೃಥ್ವೀಚಂದ್ರ, ಅವನ ಮಗ ಭುವನಚಂದ್ರ ಎಂಬ ಇಬ್ಬರ ಹೆಸರುಗಳನ್ನು ಕಾಶ್ಮೀರದ ಕವಿಯಾದ ಕಲ್ಹಣ ತನ್ನ ರಾಜತರಂಗಣಿ ಗ್ರಂಥದಲ್ಲಿ ಹೆಸರಿಸಿದ್ದಾನೆ. ಕಾಶ್ಮೀರದ ಅರಸನಾದ ಶಂಕರವರ್ಮನಿಂದ ಪೃಥ್ವೀಚಂದ್ರ ಸೋಲಿಸಲ್ಪಟ್ಟನೆಂದು ಹೇಳಿದ್ದಾನೆ.								(ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ